ಉತ್ಪಾದೀ ಶ್ರಮ

	ಸಂಪತ್ತಿನ ಉತ್ಪಾದನೆಗೆ ಕಾರಣವಾದ ದುಡಿಮೆ (ಪ್ರೊಡಕ್ಟಿವ್ ಲೇಬರ್). ಅರ್ಥಶಾಸ್ತ್ರಜ್ಞರಲ್ಲಿ ಉತ್ಪಾದೀ ಶ್ರಮವೆಂಬ ಪದ ಬಹಳ ಹಿಂದೆಯೇ ಬಂದಿತ್ತು. ಮೊಟ್ಟಮೊದಲಿಗೆ ಈ ಪದವನ್ನು ಬಳಸಿದವರು 18ನೆಯ ಶತಮಾನದ ಫ್ರೆಂಚ್ ಪ್ರಕೃತಿ ಪ್ರಾಧಾನ್ಯವಾದಿಗಳು (ಫಿಸಿಯೋಕ್ರ್ಯಾಟ್ಸ್). ಇವರ ದೃಷ್ಟಿಯಲ್ಲಿ ವ್ಯವಸಾಯವೊಂದೇ ಫಲದಾಯಕ. ವ್ಯವಸಾಯದಲ್ಲಿ ವಿನಿಯೋಗಿಸಲಾದ ಶ್ರಮವನ್ನು ಉತ್ಪಾದೀ ಶ್ರಮವೆಂದೂ ಕೈಗಾರಿಕೆ, ವಾಣಿಜ್ಯ, ಮುಂತಾದ ಇತರ ಕ್ಷೇತ್ರಗಳಲ್ಲಿನ ಶ್ರಮವನ್ನು ಅನುತ್ಪಾದೀ ಶ್ರಮವೆಂದೂ ಅವರು ಸಾರಿದರು. ಆದರೆ ಕ್ರಮೇಣ ಸಿದ್ಧವಸ್ತುಗಳ ತಯಾರಕರ ಶ್ರಮವನ್ನೂ ಉತ್ಪಾದೀ ಶ್ರಮದಲ್ಲಿ ಸೇರಿಸಲಾಯಿತು.

	ವಸ್ತುಗಳ ಮೌಲ್ಯವನ್ನು ಹೆಚ್ಚಿಸದ ದುಡಿಮೆ ಉತ್ಪಾದೀ ಶ್ರಮವಾಗಲಾರದೆಂಬುದು ಆಡಂ ಸ್ಮಿತ್ ಹಾಗೂ ಆತನ ಕಾಲದ ಇತರ ಅರ್ಥಶಾಸ್ತ್ರಜ್ಞರ ಭಾವನೆಯಾಗಿತ್ತು. ಸಂಗೀತಗಾರ, ನಟ, ಸೈನಿಕ, ವಕೀಲ, ಅಧ್ಯಾಪಕ ಮುಂತಾದವರ ಸೇವೆಗಳು ಈ ದೃಷ್ಟಿಯಿಂದ ಉತ್ಪಾದೀ ಶ್ರಮಗಳಲ್ಲ.

	ಆಧುನಿಕ ಅರ್ಥಶಾಸ್ತ್ರಜ್ಞರು ಉತ್ಪಾದೀ ಶ್ರಮ ಮತ್ತು ಅನುತ್ಪಾದೀ ಶ್ರಮಗಳಲ್ಲಿನ ವ್ಯತ್ಯಾಸವನ್ನು ತೆಗೆದುಹಾಕಿ ಮೂರ್ತವಸ್ತುಗಳನ್ನು ಹಾಗೂ ಅಮೂರ್ತ ಸೇವೆಗಳನ್ನು ಉತ್ಪಾದಿಸುವ ಶ್ರಮಗಳೆರಡನ್ನೂ ಉತ್ಪಾದೀ ಶ್ರಮವೆಂದೇ ಪರಿಗಣಿಸಿದ್ದಾರೆ. ಸಾರಿಗೆ ಕೆಲಸಗಾರರು, ವ್ಯಾಪಾರೋದ್ಯಮಿಗಳ ಪ್ರತಿನಿಧಿಗಳು, ಬ್ಯಾಂಕ್ ನೌಕರರು ಮೊದಲಾದ ಶ್ರಮಜೀವಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸುವ ಶ್ರಮವೂ ಕೈಗಾರಿಕೋದ್ಯಮಗಳಲ್ಲಿ ಬುದ್ಧಿ ಶಕ್ತಿಯನ್ನೊದಗಿಸುವ ಉದ್ಯಮ ಚಾಲಕರ, ಯಂತ್ರ ನಿರ್ಮಾಪಕರ, ವ್ಯವಸ್ಥಾಪಕರ ಹಾಗೂ ಆಡಳಿತಗಾರರ ಶ್ರಮವೂ ಕಚ್ಚಾ ಸಾಮಗ್ರಿಗಳನ್ನು ಬೆಳೆಯುವವರ ಮತ್ತು ಕೈಗಾರಿಕಾ ಉಪಕರಣ ತಯಾರಕರ ಶ್ರಮದಷ್ಟೇ ಮುಖ್ಯವಾದದ್ದೆಂದು ತೋರಿಸಿದ್ದಾರೆ.

	ಮೇಲೆ ಹೇಳಿದ ರೀತಿಯಲ್ಲಿ ಉತ್ಪಾದೀ ಶ್ರಮವನ್ನು ವಿವರಿಸುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಹಲವು ವೇಳೆ ಶ್ರಮದ ಉದ್ದೇಶ ಸಫಲವಾಗದಿರಬಹುದು. ವಸ್ತು (ಮೂರ್ತ) ಹಾಗೂ ಸೇವೆ (ಅಮೂರ್ತ) ಗಳಲ್ಲಿ ಉಪಯುಕ್ತತೆಯನ್ನು ಸೃಷ್ಟಿಸುವ ಉದ್ದೇಶ ಇದ್ದೂ ಶ್ರಮ ಸಫಲವಾಗದಿರಬಹುದು. ಪನಾಮಾ ಕಾಲುವೆಯ ನಿರ್ಮಾಣದಲ್ಲಿ ಮೊಟ್ಟಮೊದಲು ತೊಡಗಿದಾಗ ಅದರಲ್ಲಿ ವಿನಿಯೋಗಿಸಿದ ಶ್ರಮ ಸಫಲವಾಗಲಿಲ್ಲ; ಮತ್ತೆ ಆ ಕೆಲಸದಲ್ಲಿ ತೊಡಗಿದಾಗ ಅದನ್ನು ಸಾಧಿಸುವುದಕ್ಕೆ ಮತ್ತೆ ಶ್ರಮ ಬಳಸಿಕೊಳ್ಳಲಾಯಿತು. ಮೊದಲ ಸಲ ಉಪಯೋಗಿಸಿದ್ದು ವ್ಯರ್ಥಶ್ರಮ. ಮಾರ್ಷಲ್ ಹೇಳಿರುವ ಹಾಗೆ ಇಂಥ ವ್ಯರ್ಥವಾದ ಹಾಗೂ ತಪ್ಪು ದಾರಿಯಲ್ಲಿ ವಿನಿಯೋಗಿಸಲಾದ ಶ್ರಮವನ್ನು ಅನುತ್ಪಾದೀ ಶ್ರಮವೆಂದು ಪರಿಗಣಿಸಬೇಕು.

	ಅಂತೆಯೇ ಹಡಗು ಕಳ್ಳರು, ದರೋಡೆಕೋರರು, ಕಳ್ಳಕಾಕರು, ಜೂಜುಕೋರರು ಮುಂತಾದ ಸಮಾಜಘಾತಕ ವ್ಯಕ್ತಿಗಳ ಶ್ರಮವನ್ನೂ ಅನುತ್ಪಾದೀ ಶ್ರಮವೆಂದೇ ಹೇಳಬೇಕು. ಆದರೆ ಅಳಲೆಕಾಯಿ ಪಂಡಿತ, ಮದ್ಯ ತಯಾರಕ, ಅಶ್ಲೀಲ ಸಾಹಿತ್ಯ ಲೇಖಕ-ಇವರ ಶ್ರಮವನ್ನೂ ಉತ್ಪಾದೀ ಶ್ರಮವೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ಇವರ ಸೇವೆಯ ಫಲವನ್ನು ಹಣ ಕೊಟ್ಟು ಕೊಳ್ಳುವವರಿದ್ದಾರೆ. ನೀತಿ-ಅನೀತಿ ಪ್ರಶ್ನೆ ಅರ್ಥಶಾಸ್ತ್ರದ ವ್ಯಾಪ್ತಿಯೊಳಕ್ಕೆ ಬರುವುದಿಲ್ಲ. ವಿಮಾಕೆಲಸಗಾರರ ಮತ್ತು ಸಮರ್ಥರಾದ ಸಣ್ಣ ವ್ಯಾಪಾರಿಗಳ ಶ್ರಮವೂ ಉತ್ಪಾದೀ ಶ್ರಮವೇ. ಶ್ರಮಿಕರ ದೃಷ್ಟಿಯಲ್ಲಿ ಉಪಯುಕ್ತತೆ ಹೊಂದಿರುವ ಚಟುವಟಿಕೆಗಳನ್ನೆಲ್ಲ ಉತ್ಪಾದೀ ಶ್ರಮವೆಂದು ಹೇಳಬಹುದು. ಆದರೆ ನ್ಯಾಯಸಮ್ಮತವಲ್ಲದ ಸಟ್ಟಾವ್ಯಾಪಾರಿಗಳ ಶ್ರಮ ಹಾಗೂ ಶಿಕ್ಷಾರ್ಹ ಚಟುವಟಿಕೆಗಳು ಮಾತ್ರ ಉತ್ಪಾದೀ ಶ್ರಮ ಆಗಲಾರವು.									
(ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ